ಪ್ರಸ್ತಾವನೆ
ಡಾ. ಸಿ. ಸೋಮಶೇಖರ, ಐಎಎಸ್ (ನಿ)
ಅಧ್ಯಕ್ಷರು
ಡಾ. ಸಿ. ಸೋಮಶೇಖರ - ಶ್ರೀಮತಿ ಎನ್. ಸರ್ವಮಂಗಳ ಸಾಹಿತ್ಯ ಸೇವಾ ಪ್ರತಿಷ್ಠಾನ
ಡಾ. ಸಿ. ಸೋಮಶೇಖರ, ಐಎಎಸ್ (ನಿ)
ಅಧ್ಯಕ್ಷರು
ಸುಮಾರು ನಾಲ್ಕು ದಶಕಗಳ ಕಾಲ ಸರ್ಕಾರದ ವಿವಿಧ ಇಲಾಖೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನನಗೆ ಸಾಹಿತ್ಯ, ಸಂಸ್ಕೃತಿ,ಕಲೆಗಳ ಅಭಿರುಚಿ ಬಾಲ್ಯದಿಂದಲೇ ಮೂಡಿಬಂದಿದ್ದು ನನ್ನ ಬದುಕಿನ ಸೌಭಾಗ್ಯವೇ ಎಂದು ಭಾವಿಸಿರುತ್ತೇನೆ. ವಿದ್ಯಾರ್ಥಿ ದೆಸೆಯಿಂದಲೂ ಸಾಹಿತ್ಯ,ಸಂಸ್ಕೃತಿ, ಕಲೆಗಳ ಸೇವಾದೀಕ್ಷೆಯನ್ನು ಪಡೆದುಕೊಂಡಿದ್ದ ನನಗೆ ನನ್ನ ಆಡಳಿತಾತ್ಮಕ ಕಾರ್ಯ ನಿರ್ವಹಣೆಯ ಸಂದರ್ಭದಲ್ಲಿ ಮಾರ್ಗದರ್ಶನ ನೀಡಿದ್ದುಈ ಸಾಹಿತ್ಯಿಕ ಚಿಂತನೆಯ ಅನುಭಾವದ ಮೂಸೆಯಲ್ಲಿ ಮೂಡಿಬಂದ ಮಾನವೀಯ ಸಂವೇದನೆಯೇ ಎಂದರೆ ಅತಿಶಯೋಕ್ತಿಯಲ್ಲ. ವಿಶೇಷವಾಗಿಕನ್ನಡ ಸಾಹಿತ್ಯ ಅದರಲ್ಲಿಯೂ ವಿಶೇಷವಾಗಿ ವಚನ ಸಾಹಿತ್ಯ ನನ್ನ ಆಡಳಿತ ಕ್ಷೇತ್ರದ ಕಾರ್ಯ ನಿರ್ವಹಣೆಯಲ್ಲಿ ದಾರಿದೀಪವಾಗಿ ಕೈಹಿಡಿದು ನನ್ನಆಡಳಿತ ಬದುಕು ಯಶಸ್ವಿಯಾಗಲು ಮೂಲ ಪ್ರೇರಣೆಯಾಯಿತು ಎಂಬುದು ಸತ್ಯ.
ನನ್ನ ಆಡಳಿತದ ಅವಧಿಯಲ್ಲಿಯೇ ಹಲವಾರು ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಸಂಘ ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ನನಗೆನಿವೃತ್ತಿಯ ನಂತರ ಸಂಪೂರ್ಣವಾಗಿ ಸಾಹಿತ್ಯಿಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂಬ ಬಯಕೆಯು ಸಹಜವಾಗಿಚಿಗುರೊಡೆಯಿತು. ಬಸವ ವೇದಿಕೆಯ ಸಂಸ್ಥಾಪಕ ಅಧ್ಯಕ್ಷನಾಗಿ ನಾಡು ಮತ್ತು ರಾಷ್ಟ್ರದಲ್ಲಿ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಹತ್ತಾರುಹಿರಿಯ ಚೇತನಗಳಿಗೆ ಬಸವಶ್ರೀ ಮತ್ತು ವಚನಸಾಹಿತ್ಯಶ್ರೀ ಪ್ರಶಸ್ತಿಗಳನ್ನು ನೀಡಿ ಗೌರವಿಸುವ ಸುಯೋಗವು ಒದಗಿ ಬಂದದ್ದು ನನ್ನ ಭಾಗ್ಯವೇ ಸರಿ.ಇಂದು ಬಸವ ವೇದಿಕೆ ನಾಡಿನಾದ್ಯಂತ ಬಸವ ತತ್ವ ವಿಚಾರಗಳ ಪ್ರಚಾರವನ್ನು ಕೈಗೊಳ್ಳುವ ಮೂಲಕ ವಚನ ಸಾಹಿತ್ಯವನ್ನು ನಾಡಿಗೆ ಪರಿಚಯಿಸುತ್ತಿರುವಒಂದು ಉನ್ನತ ಕ್ರಿಯಾಶೀಲ ಸಂಸ್ಥೆಯಾಗಿದೆ. ಹೀಗೆ ಇನ್ನೂ ಹಲವಾರು ಸಂಘ ಸಂಸ್ಥೆಗಳೊಂದಿಗೆ ನನಗಿರುವ ಸಂಬಂಧಗಳು ನನ್ನನ್ನು ಹೆಚ್ಚುಸಮಾಜಮುಖಿಯಾಗುವಂತೆ ಮಾಡಿವೆ. ವಚನಗಳಲ್ಲಿ ಸಾಮಾಜಿಕ ಚಿಂತನೆ ಎಂಬ ಮಹಾ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಿಲಿಟ್ಪಡೆದ ನನಗೆ ಬಸವಾದಿ ಶರಣರ ವಿಚಾರಧಾರೆ ನನ್ನ ಬದುಕಿಗೆ ಒಂದು ಮಾನವೀಯ ಸ್ಪರ್ಶ ತಂದುಕೊಟ್ಟಿದೆ.
ನನ್ನೆಲ್ಲ ಕ್ರಿಯಾತ್ಮಕ ಬದುಕಿಗೆ ದಿವ್ಯಸ್ಫೂರ್ತಿ ನೀಡಿರುವವರು ತ್ರಿವಿಧ ದಾಸೋಹಿಗಳೂ, ಶತಾಯುಷಿಗಳೂ, ಸಿದ್ಧಗಂಗೆಯ ಮಠಾಧ್ಯಕ್ಷರಾಗಿರುವಪರಮಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು. ಅಂತೆಯೇ ನಾಡಿನ ಹಿರಿಯ ಧಾರ್ಮಿಕ ಗುರುಗಳು ನನಗೆ ಸದಾಕಾಲ ಆಶೀರ್ವದಿಸುತ್ತಾಅಪಾರ ಸ್ಫೂರ್ತಿ ಹಾಗೂ ಚೈತನ್ಯವನ್ನು ತುಂಬುತ್ತಾ ಬಂದಿದ್ದಾರೆ. ಅವರ ಆಶಯ ಮತ್ತು ನಿರೀಕ್ಷೆಗಳಿಗೆ ತಕ್ಕ ಹಾಗೆ ಅವರ ದಿವ್ಯ ಮಾರ್ಗದರ್ಶನದಲ್ಲಿನಾಡಿನ ಸಾಹಿತ್ಯ ಸೇವಾಕ್ಷೇತ್ರದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಬೇಕೆಂಬುದು ನಮ್ಮ ಸಂಕಲ್ಪವಾಗಿದೆ.
ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿರುವ ವಚನ ಸಾಹಿತ್ಯ, ದಾಸ ಸಾಹಿತ್ಯ, ಜಾನಪದ ಸಾಹಿತ್ಯ ಮತ್ತು ಈ ಸಿರಿಯನ್ನು ಜನಮಾನಸಕ್ಕೆ ಮುಟ್ಟಿಸಿರುವಸಂಗೀತ ಮಾಧ್ಯಮದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಸಾಧಕರನ್ನು ಪ್ರತಿವರ್ಷವೂ ಗುರುತಿಸಿ ಗೌರವಿಸಬೇಕೆಂಬ ಒಂದು ಮಹತ್ವಾಕಾಂಕ್ಷೆಯಿಂದಪ್ರತಿಷ್ಠಾನವೊಂದನ್ನು ಪ್ರಾರಂಭಿಸಬೇಕೆಂಬ ನಮ್ಮ ಆಶಯವು ಕಳೆದ ವರ್ಷ ಕೈಗೂಡಿದೆ.
ನನ್ನ ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿ ನನಗೆ ಸದಾ ಸ್ಫೂರ್ತಿಯುತ ಸಹಕಾರ ನೀಡುತ್ತ ಬಂದಿರುವ ನನ್ನ ಪತ್ನಿ ಶ್ರೀಮತಿ ಸರ್ವಮಂಗಳ ಹಾಗೂ ನಾನುಜೊತೆಗೂಡಿ ಪ್ರಾರಂಭಿಸಿರುವ ಈ ಪ್ರತಿಷ್ಠಾನದ ಆಶ್ರಯದಲ್ಲಿ ಕನ್ನಡ ನಾಡಿನ ಜಾನಪದ, ವಚನಸಾಹಿತ್ಯ ಹಾಗೂ ದಾಸಸಾಹಿತ್ಯದ ಅಡಿಯಲ್ಲಿ ವಿಶಿಷ್ಠಸೇವೆ ಸಲ್ಲಿಸಿರುವ ಸಾಹಿತ್ಯ ಸಾಧಕರುಗಳಿಗೆ ಪ್ರತಿವರ್ಷ ‘ಸಂಸ್ಕೃತಿ ಸಂಗಮ ಪ್ರಶಸ್ತಿ ನೀಡಿ ಗೌರವಿಸುವುದು ಈ ಪ್ರತಿಷ್ಠಾನದ ಮೂಲ ಧ್ಯೇಯವಾಗಿದೆ.ಇದರೊಂದಿಗೆ ನಾಡಿನ ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರದಲ್ಲಿ ಸೃಜನಶೀಲ ಸಂಶೋಧನೆ ನಡೆಸುತ್ತಿರುವ ವಿದ್ವಾಂಸರುಗಳಿಗೆ, ಲೇಖಕರುಗಳಿಗೆ ಅವರಸಾಹಿತ್ಯ ಕೃತಿಗಳ ಪ್ರಕಟಣೆಗೆ ನೆರವು ನೀಡುವುದು, ಕಮ್ಮಟ ವಿಚಾರಗೋಷ್ಠಿ ಮತ್ತು ಸಮ್ಮೇಳನಗಳನ್ನು ಏರ್ಪಡಿಸುವುದು, ಸಮಾಜದಲ್ಲಿಸೌಹಾರ್ಧಯುತವಾದ ಜಾತ್ಯಾತೀತ ಮನೋಭಾವನೆಯನ್ನು ನೆಲೆಗೊಳಿಸುವುದು ಪ್ರತಿಷ್ಠಾನದ ಮೂಲ ಉದ್ದೇಶಗಳಾಗಿವೆ.
ದಿನಾಂಕ 5-3-2015 ರಂದು ನಡೆದ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭದಲ್ಲಿ ಜೀವಮಾನ ಸಾಧನೆಗಾಗಿ ವಚನ ಸಾಹಿತ್ಯದಲ್ಲಿ ಸನ್ಮಾನ್ಯ ಶ್ರೀಗೊ.ರು. ಚನ್ನಬಸಪ್ಪನವರಿಗೆ, ದಾಸ ಸಾಹಿತ್ಯದಲ್ಲಿ ಸನ್ಮಾನ್ಯ ಶ್ರೀ ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯ ಅವರಿಗೆ, ಜಾನಪದ ಸಾಹಿತ್ಯದಲ್ಲಿ ಸನ್ಮಾನ್ಯಶ್ರೀ ಡಾ. ಹೆಚ್.ಜೆ. ಲಕ್ಕಪ್ಪಗೌಡ ಅವರಿಗೆ ಮತ್ತು ಸಂಗೀತ ಕ್ಷೇತ್ರದಲ್ಲಿ ಶ್ರೀಮತಿ ಹೆಚ್.ಆರ್. ಲೀಲಾವತಿ ಅವರುಗಳಿಗೆ ‘ಸಂಸ್ಕೃತಿ ಸಂಗಮ ಪ್ರಶಸ್ತಿಯನ್ನು ನೀಡಿ ಅಭಿಮಾನಪೂರ್ವಕವಾಗಿ ಸನ್ಮಾನಿಸಲಾಗಿದೆ. ಪ್ರತಿ ಪುರಸ್ಕಾರವು ಹತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ
ಸದಾ ನಮಗೆ ಮಾರ್ಗದರ್ಶನ ಮತ್ತು ಆಶೀರ್ವಾದ ನೀಡುತ್ತಾ ಬಂದಿರುವ ಸುತ್ತೂರು ಶ್ರೀ ಕ್ಷೇತ್ರದ ಜಗದ್ಗುರು ಶ್ರೀ ವೀರಸಿಂಹಾಸನ ಮಠದ ಅಧ್ಯಕ್ಷರಾಗಿರುವ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ನಡೆದಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪುರಸ್ಕೃತ ಕನ್ನಡ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು ಪ್ರಶಸ್ತಿ ಪ್ರದಾನ ಮಾಡಿ ಎಲ್ಲರನ್ನೂಅಭಿನಂದಿಸಿದ್ದಾರೆ. ಈ ವಿಶೇಷ ಸಮಾರಂಭದ ಅಧ್ಯಕ್ಷತೆಯನ್ನು ಕೇಂದ್ರ ಸರ್ಕಾರದ ಮಾಜಿ ಸಚಿವರು ಹಾಗೂ ಹಿರಿಯ ರಾಜಕೀಯ ಮುತ್ಸದ್ದಿಯಾಗಿರುವ ಶ್ರೀ ಎಂ.ವಿ. ರಾಜಶೇಖರನ್ ಅವರು ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾಗಿರುವ ಡಾ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ಪ್ರಶಸ್ತಿ ಪುರಸ್ಕೃತರ ಬಗ್ಗೆ ಅಭಿನಂದನಾ ಭಾಷಣ ಮಾಡಿ ಪ್ರತಿಷ್ಠಾನಕ್ಕೆ ಶುಭ ಕೋರಿದ್ದಾರೆ. ಈ ಸಮಾರಂಭದಲ್ಲಿನಾಡಿನ ಸಾಹಿತ್ಯ, ಸಂಸ್ಕೃತಿ ಹಾಗೂ ಸಾರ್ವಜನಿಕ ಕ್ಷೇತ್ರದ ನೂರಾರು ಮಹನೀಯರುಗಳು, ಮಹಿಳೆಯರುಗಳು ಪಾಲ್ಗೊಂಡು ಸಮಾರಂಭದ ಮೆರುಗನ್ನು ಹೆಚ್ಚಿಸಿರುತ್ತಾರೆ.
ನಾಡಿನ ಸಾಹಿತ್ಯಿಕ ಹಾಗೂ ಸಾಮಾಜಿಕ ಬದುಕನ್ನು ಸಂಪದ್ಯುಕ್ತಗೊಳಿಸುವ ನಿಟ್ಟಿನಲ್ಲಿ ನಿರಂತರವಾಗಿ ಅಳಿಲು ಸೇವೆ ಸಲ್ಲಿಸುವ ಮಹೋದ್ದೇಶವನ್ನು ಹೊಂದಿ ದುಡಿಯುವುದೇ ನಮ್ಮ ಪ್ರತಿಷ್ಠಾನದ ದೃಢ ಸಂಕಲ್ಪವಾಗಿದ್ದು ಇದಕ್ಕಾಗಿ ಎಲ್ಲಾ ಸಾಹಿತ್ಯ ಸಂಸ್ಕೃತಿ ಅಭಿಮಾನಿ ಬಂಧುಗಳ ಉತ್ತೇಜನವನ್ನು ಸದಾ ನಿರೀಕ್ಷಿಸುತ್ತೇವೆ.
ಎನಿತು ಜನುಮದಲಿ, ಎನಿತು ಜೀವರಿಗೆ
ಎನಿತು ನಾವು ಋಣಿಯೋ ?
ತಿಳಿದು ನೋಡಿದರೆ, ಬಾಳು ಎಂಬುದಿದು
ಋಣದ ರತ್ನಗಣಿಯೋ -
ಎಂಬ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಈ ಕಾವ್ಯದ ಆಶಯದಂತೆ ಜಗತ್ತು ನಮಗೆ ನೀಡಿದ್ದನ್ನು ಜನ ಸಮುದಾಯದ ಕಲ್ಯಾಣಕ್ಕಾಗಿ ಸಮರ್ಪಿಸುವ ಮೂಲಕ ಸಮಾಜದ ಋಣವನ್ನು ತೀರಿಸಬೇಕೆಂಬ ಸಂಕಲ್ಪವು ನಮ್ಮ ಪ್ರತಿಷ್ಠಾನದ ಮೂಲ ಉದ್ದೇಶವಾಗಿದೆ ಎಂಬುದನ್ನು ವಿನಯಪೂರ್ವಕವಾಗಿ ಮತ್ತೊಮ್ಮೆ ತಮ್ಮಲ್ಲಿ ನಿವೇದಿಸಿಕೊಳ್ಳುತ್ತಾ ಈ ಪ್ರತಿಷ್ಠಾನದ ಸ್ಥಾಪನೆಗೆ ಸ್ಫೂರ್ತಿ ನೀಡಿದ ಸರ್ವರಿಗೂ ಪ್ರೀತಿಯ ಪ್ರಣಾಮಗಳನ್ನು ಸಲ್ಲಿಸುತ್ತಾ ಇಂದು ಸಂಸ್ಕೃತಿ ಸಂಗಮ ಪ್ರಶಸ್ತಿಗೆ ಭಾಜನರಾಗಿರುವ ನಾಡಿನ ಹಿರಿಯ ಶ್ರೇಷ್ಠ ಸಾಹಿತ್ಯ, ಸಂಸ್ಕೃತಿ, ಸಂಗೀತ ಸಾಧಕರುಗಳಿಗೆ ಗೌರವಪೂರ್ವಕವಾದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
ಬೆಂಗಳೂರು
ದಿನಾಂಕ: 17-07-2016
ಡಾ. ಸಿ. ಸೋಮಶೇಖರ, ಐಎಎಸ್ (ನಿ)
ಪ್ರತಿಷ್ಠಾನದ ಅಧ್ಯಕ್ಷರು